ಟೆನೆಬ್ರಿಯಾನಿಡೀ	
	ಕೋಲಿಯಾಪ್ಟರ ಗಣಕ್ಕೆ ಸೇರಿದ ಒಂದು ಕುಟುಂಬ. ಸುಮಾರು 10,000ಕ್ಕೂ ಹೆಚ್ಚು ಬಗೆಗಳು ಇದರಲ್ಲಿ ಸೇರಿವೆ.

	ಮೆರಿನಸ್ ಲೀಪಿಸ್  ಜೀರುಂಡೆ  ಟ್ರೈಬೋಲಿಯಮ್ ಕನ್ ಫ್ಯೂಸಮ್ ಜೀರುಂಡೆ ಇವುಗಳ ಹೊಟ್ಟೆಯ ತಳಭಾಗದಲ್ಲಿ ಮೊದಲ ಮೂರು ಖಂಡಗಳು ಒಂದು ಗೂಡಿವೆ. ಕಾಲುಗಳಲ್ಲಿ ಮೊದಲನೆಯ ಎರಡು ಜತೆ ಕಾಲುಗಳ ಟಾರ್ಸಸಿನಲ್ಲಿ ಐದು ಖಂಡಗಳು ಮತ್ತು ಕೊನೆಯ ಕಾಲುಗಳ ಟಾರ್ಸಸಿನಲ್ಲಿ ನಾಲ್ಕು ಖಂಡಗಳು ಇವೆ. ಬಹಳಮಟ್ಟಿಗೆ ಕಂದು ಬಣ್ಣದ, ಗಡುಸಾದ, ಚಪ್ಪಟೆಯಾದ ಕೀಟಗಳಿವೆ. ಆಂಟೆನೀಗಳು ಮೋಟು, 11 ಖಂಡಗಳನ್ನು ಒಳಗೊಂಡಿವೆ. ಬಾಯಿಭಾಗಗಳು ಆಹಾರವನ್ನು ಕಚ್ಚಿ ತಿನ್ನುವುದಕ್ಕೆ ಅನುಕೂಲವಾಗಿವೆ. ರೆಕ್ಕೆಗಳು ಕೆಲವು ಪ್ರಭೇದಗಳಲ್ಲಿ ಮಾತ್ರ ಕಂಡುಬರುವುವು. ಇವು ಸಾಮಾನ್ಯವಾಗಿ ನಿಶಾಚರಿಗಳು ಹಾಗೂ ಸಸ್ಯಾಹಾರಿಗಳು; ಕೊಳೆಯುತ್ತಿರುವ ಪದಾರ್ಥಗಳನ್ನು, ಬೂಷ್ಟು ಅಥವಾ ಸಗಣಿಯನ್ನು ತಿಂದು ಬೆಳೆಯುತ್ತವೆ. ಬಹುಮಟ್ಟಿಗೆ ಮಣ್ಣಿನಲ್ಲಿ ವಾಸಿಸುತ್ತವೆ. ಕೆಲವು ಬಗೆಗಳು ಇರುವೆಗಳ ಗೂಡಿನಲ್ಲೂ ಇರುವುದುಂಟು. ಈ ಕೀಟಗಳ ಜೀವನಚರಿತ್ರೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಡಿಂಬಗಳು ಉದ್ದ. ಇವುಗಳ ಹಿಂಭಾಗದ ಕೊನೆಯಲ್ಲಿ ಎರಡು ಕೊಕ್ಕೆಗಳು ಮತ್ತು ತಳಭಾಗದಲ್ಲಿ ಒಳಕ್ಕೆ ಎಳೆದುಕೊಳ್ಳಬಹುದಾದ ಒಂದು ಕೊಕ್ಕೆ ಇದೆ. ಸಾಮಾನ್ಯವಾಗಿ ಕೊಳೆಯುತ್ತಿರುವ ಪದಾರ್ಥಗಳೇ ಇವುಗಳ ಆಹಾರ. ಭಾರತದಲ್ಲಿ ಈ ಗುಂಪಿಗೆ ಸೇರಿದ 300 ಬಗೆಯ ಕೀಟಗಳುಂಟು. ಉದಾಹರಣೆಗೆ ಬ್ಲಾಪ್ಸ್, ಒಪೇಟ್ರಮ್ ಮುಂತಾದ ಕೆಲವು ಕೀಟಗಳು ಹಾನಿಕರ ಪಿಡುಗುಗಳೆನಿಸಿವೆ. ಟೆನೆಬ್ರಿಯೊ ಮಾಲಿಟರ್ ಎಂಬುದು ಪ್ರಪಂಚದ ನಾನಾ ಭಾಗಗಳಲ್ಲಿ ಅನೇಕ ತರದ ದವಸಧಾನ್ಯ ಮತ್ತು ಹಿಟ್ಟುಗಳು ಪೀಡೆಯಾಗಿದೆ. ಟ್ರೈಬೋಲಿಯಂ ಫೆರೊಜೀನಿಯಂ ಮತ್ತು ಟ್ರೈಬೋಲಿಯಮ ಕನ್ಫೂಸಂ ಎಂಬುವು ಮುಸುಕಿನ ಜೋಳದ ಹಿಟ್ಟು ಮತ್ತು ಧಾನ್ಯಗಳನ್ನು ಮುತ್ತುತ್ತವೆ.
(ಜಿ.ಪಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ